 ವನಸುಮ 
ವನಸುಮದೊಲೆನ್ನ ಜೀ-
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ ಹೇ ದೇವ ||
ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ||

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ||

ಉಪಕಾರಿ ನಾನು ಎನ್-
ಉಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ||https://kn.wikisource.org/s/1h2s ಪುಟ:ಕನ್ನಡದ ಬಾವುಟ.djvu/೧೭೧
 ಕವಿ:ಡಿ. ವಿ. ಗುಂಡಪ್ಪ 

ನೋಡಿ
ಡಿವಿಜಿ ಸಾಹಿತ್ಯ
ಇವನಾರು!
ವನಸುಮ
ನಿವೇದನ 
ಮಂಕುತಿಮ್ಮನ ಕಗ್ಗ
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯವರ್ಗ:ಭಾವಗೀತೆಗಳು